ದಾಖಲಾದ ದಿನಾಂಕ: 01.02.2019
ವಿಲೇವಾರಿ ದಿನಾಂಕ: 20.01.2020
ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, 8ನೇ ಮಹಡಿ, ಬಿ.ಡಬ್ಲ್ಯೂ.ಎಸ್.ಎಸ್.ಬಿ ಕಟ್ಟಡ, ಕಾವೇರಿ ಭವನ, ಬೆಂಗಳೂರು-560 009
ಫಿರ್ಯಾದು ಸಂಖ್ಯೆ: 232/2019
ದಿನಾಂಕ 20ನೇ ಜನವರಿ 2020ರಂದು
ಪ್ರಸ್ತುತ ಪಡಿಸಿದೆ.
ಶ್ರೀ ಎಸ್.ಎಲ್.ಪಾಟೀಲ್, ಅಧ್ಯಕ್ಷರು
ಶ್ರೀಮತಿ ಪಿ.ಕೆ.ಶಾಂತ, ಸದಸ್ಯರು
ದೂರುದಾರರು:-
ಶ್ರೀ ನರಸೇಗೌಡ
ಬಿನ್. ಲೇಟ್. ಚಿಕ್ಕಣ್ಣ
ವಯಸ್ಸು 57 ವರ್ಷ
ಬೆಳಗುಂಬ ಕಸಬ ಹೋಬಳಿ,
ಮಾಗಡಿ ತಾಲ್ಲೂಕು,
ರಾಮನಗರ ಜಿಲ್ಲೆ – 562120
ವಿರುದ್ಧ
ಎದುರುದಾರರು:-
ವ್ಯವಸ್ಥಾಪಕ ನಿರ್ದೇಶಕರು
ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ
ಬೀಜ ಭವನ, ಬಳ್ಳಾರಿ ರಸ್ತೆ,
ಹೆಬ್ಬಾಳ, ಬೆಂಗಳೂರು-24.
(ಪ್ರತಿವಾದಿಯ ಪರವಾಗಿ
ಶ್ರೀ ಆರ್.ಎಸ್.ಹೆಗ್ಡೆ ಹಾಜರಿರುತ್ತಾರೆ)
ತೀರ್ಪು
ಶ್ರೀ ಎಸ್.ಎಲ್.ಪಾಟೀಲ್, ಅಧ್ಯಕ್ಷರು
ದೂರುದಾರರು ಎದುರುದಾರರ ವಿರುದ್ಧ ಗ್ರಾಹಕರ ರಕ್ಷಣಾ ಕಾಯ್ದೆ 1986ರ ಕಲಂ 12ರ ಅಡಿಯಲ್ಲಿ ದೂರು ಸಲ್ಲಿಸಿದ್ದು, ಎದುರುದಾರರಿಂದ ಉತ್ತಮ ಫಸಲಿಗೆ ಆದ ನಷ್ಟ ರೂ.61,484/-; ಮಾನಸಿಕ ಹಾಗೂ ದೈಹಿಕ ತೊಂದರೆಗಾಗಿ ರೂ.50,000/- ಮತ್ತು ಪ್ರಕರಣ ದಾಖಲಿಸಲು ಓಡಾಟದ ಸಲುವಾಗಿ ಆದ ಖರ್ಚು ರೂ.40,000/- ಎಲ್ಲಾ ಸೇರಿ ಒಟ್ಟು ರೂ.1,51,484/- ನ್ನು ಪರಿಹಾರವಾಗಿ ಕೊಡಿಸುವಂತೆ ಕೋರಿದ್ದಾರೆ.
2. ದೂರುದಾರರ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ದೂರುದಾರರು ಅವರ 2 ಎಕರೆ 36 ಗುಂಟೆ ಖುಷ್ಕಿ ಜಮೀನಿನಲ್ಲಿ ಬಿತ್ತನೆ ಮಾಡಲು ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಮಾಗಡಿ ಇಲ್ಲಿ ದಿ:19.06.18ರಂದು ರೂ.500/- ಕೊಟ್ಟು ಎಂ.ಆರ್.6 ಬಿತ್ತನೆ ರಾಗಿ 25 ಕೆ.ಜಿಯನ್ನು ಖರೀದಿಸಿದ್ದಾರೆ. ಬಿತ್ತನೆ ಹದಗಳಿಸಲು ಖುಷ್ಕಿ ಜಮೀನನ್ನು/ಭೂಮಿಯನ್ನು ದಿ:28.04.18, 26.05.18 ಹಾಗೂ 22.06.18ರಂದು ಮೂರು ಹಂತಗಳಲ್ಲಿ ಟ್ರಾಕ್ಟರ್‌ನಲ್ಲಿ ಹದಗೊಳಿಸಲು ರೂ.9,900/- ಖರ್ಚು ಮಾಡಿರುತ್ತಾರೆ. ನಂತರ 5 ಟ್ರಾಕ್ಟರ್ ಕೊಟ್ಟಿಗೆ ಗೊಬ್ಬರ ಹಾಕಲು, ಎತ್ತುಗಳು ಮತ್ತು ಆಳುಗಳಿಂದ ಬಿತ್ತನೆ ಮಾಡಿಸಲು ರೂ.30,000/- ಖರ್ಚು ಮಾಡಿರುತ್ತಾರೆ. ಬಿತ್ತನೆ ಮಾಡಿದ ನಂತರ ಪೈರಿಗೆ ಕುಂಟೆ ಹೊಡೆಯಲು, ಎತ್ತುಗಳ ಹಾರು, ಕೂಲಿ, ರಸಗೊಬ್ಬರ, ಕಳೆ ತೆಗೆಸಲು ಒಟ್ಟು ರೂ.51,800 ಖರ್ಚು ಮಾಡಿರುತ್ತಾರೆ. ಈ ಎಲ್ಲಾ ಕ್ರಮಬದ್ಧ ಕೆಲಸಗಳನ್ನು ಮಾಡಿದ್ದರೂ ಸಹ ಎಂ.ಆರ್.6 ರಾಗಿ ಕಲಬೆರಕೆಯಾಗಿದ್ದು, ಈ ತಾಕುಗಳು ಸುಮಾರು ಶೇಕಡ 15ರಿಂದ 50 ಹಾಗೂ 3-4 ವಿವಿಧ ತಳಿಗಳಿಂದ ಮಿಶ್ರಣವಾಗಿದ್ದು, ಅವುಗಳು ಈಗಾಗಲೇ ಕಟಾವಿಗೆ ಬಂದಿರುತ್ತವೆ ಆದರೆ ಎಂ.ಆರ್.6 ತಳಿಯು ಇನ್ನು ಹಾಲು ತುಂಬುವ ಹಂತದಲ್ಲಿರುತ್ತವೆ. ದಿ:09.11.18ರಂದು ಹೊಲ ಕಟಾವು ಮಾಡುವಾಗ ವಿಜ್ಞಾನಿಗಳು ಪರೀಶೀಲಿಸಿ ಕೆಲವು ತಾಕುಗಳಲ್ಲಿ ಬೆರಕೆ ರಾಗಿ ತಳಿಗಳು ಶೇಕಡ 40-50ರಷ್ಟಿದ್ದು ವಿವಿಧ ಹಂತಗಳಾದ ಹೂ ಬಂದಿರುವುದು, ಕಾಳು ಕಟ್ಟಿರುವುದು ಹಾಗೂ ಕಟಾವಿಗೆ ಬಂದಿರುವ ಹಂತದಲ್ಲಿದ್ದು ರೈತರಿಗೆ ಏಕ ಕಾಲಕ್ಕೆ ಕಟಾವು ಮಾಡಲು ಸಾಧ್ಯವಾಗುವುದಿಲ್ಲ ಎಂದು ಪರಿಶೀಲನಾ ವರದಿ ಕೊಟ್ಟಿರುತ್ತಾರೆ. ಸದರಿ ಜಮೀನಿನಲ್ಲಿ ಪ್ರತಿ ವರ್ಷ 45 ಕ್ವಿಂಟಾಲ್ ರಾಗಿ ಬೆಳೆಯುತ್ತಿದ್ದು ಈ ಸಾರಿ ಕಲಬೆರಕೆ ಎಂ.ಆರ್.6 ಬಿತ್ತನೆ ರಾಗಿ ಬೀಜದಿಂದ ಕೇವಲ 18 ಕ್ವಿಂಟಾಲ್ ರಾಗಿ ಬೆಳೆ ಬಂದಿದ್ದು ಸುಮಾರು 27 ಕ್ವಿಂಟಾಲ್ ರಾಗಿ ನಷ್ಟವಾಗಿರುತ್ತದೆ. ಸರ್ಕಾರ ನಿಗಧಿಗೊಳಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆ 2018-19ರಂತೆ 27 ಕ್ವಿಂಟಾಲ್‌ಗೆ ರೂ.78,219/- ನಷ್ಟವಾಗಿರುತ್ತದೆ. ಆದ್ದರಿಂದ ದೂರುದಾರರು ಪ್ರಾರ್ಥನೆಯಲ್ಲಿ ಕೋರಿರುವಂತೆ ಎದುರುದಾರರಿಂದ ನಷ್ಟವನ್ನು ಭರಿಸಿಕೊಡಬೇಕಾಗಿ ಕೋರಿ ಈ ದೂರನ್ನು ಸಲ್ಲಿಸಿದ್ದಾರೆ.
3. ದೂರನ್ನು ಅಂಗೀಕರಿಸಿದ ಬಳಿಕ ಎದುರುದಾರರಿಗೆ ನೋಟೀಸನ್ನು ನೀಡಲಾಯಿತು. ಎದುರುದಾರರು ತಮ್ಮ ವಕೀಲರ ಮೂಲಕ ಹಾಜರಾಗಿ ತಮ್ಮ ಪ್ರತಿವಾದ/ತಕರಾರರನ್ನು ಮಂಡಿಸಿರುತ್ತಾರೆ. ಎದುರುದಾರರು ತಮ್ಮ ತಕರಾರಿನಲ್ಲಿ, ರೈತರಿಗೆ ವಿತರಿಸುವ ಬಿತ್ತನೆ ಬೀಜಗಳು ಕರ್ನಾಟಕ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆಯಿಂದ ಪರೀಕ್ಷೆಗೆ ಒಳಪಟ್ಟು ಬಿತ್ತನೆಗೆ ಹಾಗೂ ಒಳ್ಳೆಯ ಇಳುವರಿಗೆ ಯೋಗ್ಯವೆಂದು ಪ್ರಮಾಣೀಕರಣಗೊಂಡಿರುವುದರಿಂದ ಯಾವುದೇ ರೀತಿಯ ಕಲಬೆರಕೆ ಅಥವಾ ವಿವಿಧ ತಳಿಗಳ ಮಿಶ್ರಣದಿಂದ ಕೂಡಿರುವುದಿಲ್ಲ ಎಂದು ತಿಳಿಸುತ್ತಾರೆ. 2018-19ರ ಸಾಲಿನ ಬಿತ್ತನೆ ಕಾಲದಲ್ಲಿ ಮಾಗಡಿ ತಾಲ್ಲೂಕಿನಲ್ಲಿ, ದೃಢೀಕರಣಗೊಂಡ ಸುಮಾರು 800 ಕ್ವಿಂಟಾಲ್ ಎಂ.ಆರ್.6 ಬಿತ್ತನೆ ರಾಗಿಯನ್ನು ವಿತರಿಸಿದ್ದಾರೆ. ದೂರುದಾರರನ್ನು ಹೊರತು ಪಡಿಸಿ ಯಾವುದೇ ರೈತರಿಂದ ಸದರಿ ತಳಿಯು ದೋಷದಿಂದ ಕೂಡಿದೆ ಹಾಗೂ ಇಳುವರಿ ಕಡಿಮೆ ಬಂದಿದೆ ಎಂಬ ಬಗ್ಗೆ ದೂರು ಬಂದಿರುವುದಿಲ್ಲ. ಕೆ.ಎಸ್.ಎನ್.ಎಂ.ಡಿ.ಸಿ ಯು ಮಾಗಡಿ ತಾಲ್ಲೂಕಿನಲ್ಲಿ 2018-19ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ನಿಗದಿತ ಮಳೆಗಿಂತ ಕಡಿಮೆ/ಸಣ್ಣ ಮಳೆಯಾಗಿದೆ ಎಂದು ವರದಿ ನೀಡಿದ್ದಾರೆ. ಸದರಿ ಬಿತ್ತನೆ ರಾಗಿಯು ಎಕರೆಗೆ 10-12 ಕ್ವಿಂಟಾಲ್ ಇಳುವರಿ ನೀಡುತ್ತದೆ. ಕಡಿಮೆ ಮಳೆಯಿಂದಾಗಿ, ಕಟಾವಿನ ಕೆಲಸವನ್ನು ವಿಳಂಬ ಮಾಡಿದ್ದೇ ಇಳುವರಿ ಕಡಿಮೆ ಆಗಲು ಕಾರಣವಾಗಿದೆ. ದೂರುದಾರರು ಹಾಕಿಕೊಂಡಿರುವ ದೂರು ಸುಳ್ಳು/ಆಧಾರ ರಹಿತ/ಕ್ಷುಲ್ಲಕ ದಿಂದ ಕೂಡಿದೆ. ಆದ್ದರಿಂದ, ಸದರಿ ದೃಢೀಕೃತ ಬಿತ್ತನೆ ರಾಗಿಯು ಯಾವುದೇ ದೋಷದಿಂದ/ಬೆರಕೆ ತಳಿಗಳಿಂದ ಕೂಡಿಲ್ಲ ಹಾಗೂ ಎದುರುದಾರರು ನೀಡಿರುವ ಸೇವೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ತಿಳಿಸುತ್ತಾ ಸದರಿ ದೂರುದಾರರು ಹಾಕಿಕೊಂಡ ದೂರನ್ನು ವಜಾಗೊಳಿಸಬೇಕಾಗಿ ಕೋರುತ್ತಾರೆ.
4. ದೂರುದಾರರು ಮತ್ತು ಎದುರುದಾರರ ಪ್ರಮಾಣಿಕೃತ ಸಾಕ್ಷಿಗಳು ಮತ್ತು ದಾಖಲೆಗಳನ್ನು ಹಾಜರುಪಡಿಸಿದ್ದು ಗಮನಿಸಲಾಯಿತು. ವಾದ ಮಂಡನೆಯನ್ನು ಕೇಳಲಾಯಿತು.
5. ಈಗ ನಮ್ಮ ಗಮನಕ್ಕೆ ಬಂದ ಅಂಶಗಳೆಂದರೆ:-
- ದೂರುದಾರರು ಎದುರುದಾರರ ವಿರುದ್ಧ ಸೇವಾ ನ್ಯೂನ್ಯತೆಯನ್ನು ದೃಢಪಡಿಸಿದ್ದಾರೆಯೇ ?
2. ಹಾಗಾದರೆ ದೂರುದಾರರು ಯಾವ ರೀತಿಯ ಪರಿಹಾರಕ್ಕೆ ಅರ್ಹರು ?
6. ಈ ಮೇಲ್ಕಂಡ ಅಂಶಗಳಿಗೆ ನಮ್ಮ ಉತ್ತರ: -
1 ನೇ ಅಂಶ: ಸಕಾರಾತ್ಮಕವಾಗಿ
2 ನೇ ಅಂಶ: ಅಂತಿಮ ಆದೇಶದ ಪ್ರಕಾರ
ಕಾರಣಗಳು
7. ಅಂಶ 1: - ದೂರುದಾರರು ತನ್ನ ದೂರಿನಲ್ಲಿ ಹಾಕಿಕೊಂಡ ವಾಸ್ತವ ಸಂಗತಿಗಳನ್ನು, ಎದುರುದಾರರು ತಕರಾರಿನಲ್ಲಿ ಹಾಕಿಕೊಂಡ ಅಂಶಗಳನ್ನು ಸಂಕ್ಷಿಪ್ತವಾಗಿ ಈಗಾಗಲೇ ಈ ಆದೇಶದ ಪ್ಯಾರಾ 2 ಮತ್ತು 3 ರಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಎದುರುದಾರರು ಒಪ್ಪಿಕೊಂಡ ಸಂಗತಿಗಳೇನೆಂದರೆ, ದೂರುದಾರರು ಕೃಷಿ ಅವಲಂಬಿತನಾಗಿದ್ದು ಆತನಿಗೆ ಒಟ್ಟು 2 ಎಕರೆ 36 ಗುಂಟೆ ಕೃಷಿ ಜಮೀನಿದ್ದು, ಅದರಲ್ಲಿ 2018ನೇ ಇಸವಿಯಲ್ಲಿ ರಾಗಿ ಬೆಳೆ ಬೆಳೆಯಲು ಎದುರುದಾರರಿಂದ ಎಂ.ಆರ್.6 ಬಿತ್ತನೆ ರಾಗಿ 25ಕೆ.ಜಿ ಯನ್ನು ಪ್ರತಿ ಕೆ.ಜಿ.ಗೆ ರೂ.20/-ರಂತೆ ಒಟ್ಟು ರೂ.500/-ಗಳನ್ನು ಕೊಟ್ಟು ಖರೀದಿ ಮಾಡಿದ್ದು ಅದು ದೂರುದಾರರು ಹಾಜರುಪಡಿಸಿದ ದಾಖಲೆ ಎಕ್ಸ್.ಎ1 ರಿಂದ ಸಮರ್ಥಿಸುತ್ತದೆ. ಅದೇ ಪ್ರಕಾರ ದೂರುದಾರರಿಗೆ 2 ಎಕರೆ 36 ಗುಂಟೆ ಜಮೀನಿರುವ ಬಗ್ಗೆ ಕೂಡ ಸಂಬಂಧಪಟ್ಟ 2 ಪಹಣಿ/ದಾಖಲೆ ಎಕ್ಸ್.ಎ2 & ಎ3 ಕೂಡ ಹಾಜರುಪಡಿಸಿದ್ದು ಅವುಗಳಲ್ಲಿ ಮುಂಗಾರು ಬೆಳೆಗೆ ಸಂಬಂಧಪಟ್ಟಂತೆ ಕಾಲಂ 9ರಲ್ಲಿ ಬೆಳೆಯ ಹೆಸರು ರಾಗಿ ಎಂದು ನಮೂದಿಸಲಾಗಿದೆ.
8. ದೂರುದಾರ ತನ್ನ ದೂರಿನಲ್ಲಿ ಎದುರುದಾರರ ಮೇಲೆ ಮಾಡಿದ ದೂರುಗಳೆಂದರೆ ಆತ ದಾಖಲೆ ಎಕ್ಸ್.ಎ1ರಡಿಯಲ್ಲಿ ಖರೀದಿ ಮಾಡಿದ 25ಕೆ.ಜಿ ಎಂ.ಆರ್.6 ಬಿತ್ತನೆ ರಾಗಿಯು ಕಲಬೆರಕೆಯಿಂದ ಕೂಡಿದ್ದು, ತಾನು ಹಾಕಿದ ರಾಗಿ ಬೆಳೆಯು ಏಕಕಾಲಕ್ಕೆ ಕಟಾವಿಗೆ ಬರದೆ ಅವುಗಳಲ್ಲಿ ಮಿಶ್ರಣವಾದ ಬೇರೆ ತಳಿಯ ಬಿತ್ತನೆ ರಾಗಿಯಿಂದ ಒಟ್ಟಿಗೆ ಕಟಾವು ಮಾಡಲು ಸಾಧ್ಯವಾಗಲಿಲ್ಲ. ಅಂದರೆ ಕೆಲವು ತಾಖುಗಳಲ್ಲಿ ಬೆಳೆಯು ವಿವಿಧ ಹಂತದಲ್ಲಿದ್ದು (ಹೂ ಬಂದಿರುವುದು, ಕಾಳು ಕಟ್ಟಿರುವುದು, ಕಟಾವಿಗೆ ಬಂದಿರುವುದು) ಒಟ್ಟಿಗೆ ಕಟಾವು ಮಾಡಲು ಸಾಧ್ಯವಾಗಲಿಲ್ಲ. ಈ ಕಲಬೆರಕೆಯಿಂದ ಕೂಡಿದ ಸದರಿ ಎಂ.ಆರ್.6 ಬಿತ್ತನೆ ರಾಗಿಯಿಂದ ಪ್ರತಿ ವರ್ಷ ತಾನು ಪಡೆಯುತ್ತಿದ್ದ 45 ಕ್ವಿಂಟಾಲ್ ರಾಗಿ ಇಳುವರಿ ಬಾರದೆ ಕೇವಲ 18 ಕ್ವಿಂಟಾಲ್ ರಾಗಿ ಇಳುವರಿ ಬಂದಿದ್ದು ತನಗೆ 27 ಕ್ವಿಂಟಾಲ್ ರಾಗಿ ಇಳುವರಿ ನಷ್ಟವಾಗಿದೆ ಎಂದು ತಿಳಿಸುತ್ತಾರೆ. ಸರ್ಕಾರ 2018-19ನೇ ಸಾಲಿಗೆ ಎಂ.ಆರ್-6 ರಾಗಿ ತಳಿಗೆ ಪ್ರತಿ ಕ್ವಿಂಟಾಲ್‌ಗೆ ರೂ.2,897/-ರಂತೆ ಬೆಂಬಲ ಬೆಲೆ ನಿಗದಿಪಡಿಸಿದ್ದು ಅದನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿ., ರಾಮನಗರ ಜಿಲ್ಲೆ, ರಾಮನಗರ ಪ್ರಕಟಿಸಿದೆ (ದಾಖಲೆ ಎಕ್ಸ್.ಎ9). ಅದರಂತೆ 27 ಕ್ವಿಂಟಾಲ್‌ನಷ್ಟು ಕಡಿಮೆ ಇಳುವರಿಯಿಂದಾದ ನಷ್ಟಕ್ಕೆ ಪ್ರತಿ ಕ್ವಿಂಟಾಲ್‌ಗೆ ರೂ.2,897/- ರಂತೆ ಆದ ಒಟ್ಟು ನಷ್ಟ ರೂ.78,219/-, ಮಾನಸಿಕ ಹಾಗೂ ದೈಹಿಕ ತೊಂದರೆಯಿಂದಾಗಿ ಆದ ನಷ್ಟ ರೂ.50,000/- ಮತ್ತು ಪ್ರಕರಣ ದಾಖಲಿಸಲು ಓಡಾಟದ ಸಲುವಾಗಿ ಆದ ನಷ್ಟ ರೂ.40,000/- ಆಗಿದ್ದು, ಈ ಪ್ರಸ್ತುತ ಪ್ರಕರಣ ದಾಖಲಿಸಿ ಪರಿಹಾರ ಕೋರಿದ್ದಾರೆ.
9. ದೂರುದಾರರು ಎದುರುದಾರರ ಮೇಲೆ ಮಾಡಿದ ಆಪಾದನೆಯನ್ನು ದಾಖಲೆ ಎಕ್ಸ್.ಎ4ರಿಂದ ಎ6 ಸಮರ್ಥಿಸುತ್ತದೆ. ದಾಖಲೆ ಎಕ್ಸ್.ಎ1ರಡಿಯಲ್ಲಿ ಖರೀದಿಸಿದ ಬಿತ್ತನೆ ರಾಗಿ ಕಲಬೆರಕೆ ಅನ್ನುವ ಬಗ್ಗೆ ಸಂಬಂಧಪಟ್ಟ ಕೃಷಿ ವಿಜ್ಞಾನಿಗಳು ಆತನ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ ಬಗ್ಗೆ ದಾಖಲೆ ಎಕ್ಸ್.ಎ4 ಕಲರ್ ಫೋಟೋಗಳು ಸಮರ್ಥಿಸುತ್ತವೆ. ಅಲ್ಲದೆ ದಿ.20.12.18ರಂದು ಸಹಾಯಕ ಕೃಷಿ ನಿರ್ದೇಶಕರು, ಮಾಗಡಿ ತಾಲ್ಲೂಕು, ಮಾಗಡಿ ಇವರು ದೂರುದಾರರಿಗೆ ಪತ್ರ ಬರೆದು ಸದರಿ ತಳಿಯ ಬಿತ್ತನೆ ರಾಗಿ ಕಲಬೆರಕೆಯಾಗಿರುವ ಕುರಿತು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ತಮ್ಮ ಜಮೀನಿನ ಬೆಳೆಯನ್ನು ಪರಿಶೀಲಿಸಿ ವರದಿ/ಎಕ್ಸ್.ಎ6 ನ್ನು ಸಲ್ಲಿಸಿದ್ದು, ಸದರಿ ವರದಿಯ ಆಧಾರದ ಮೇಲೆ ಮಾರ್ಗಸೂಚಿಯ ಅನುಸಾರ ಬೀಜ ಖರೀದಿಸಿದ ರಶೀದಿ, ಬಿತ್ತನೆ ಬೀಜದ ಚೀಲ ಮತ್ತು ಚೀಟಿಗಳೊಂದಿಗೆ ಅಹವಾಲನ್ನು ಗ್ರಾಹಕರ ವೇದಿಕೆಯಲ್ಲಿ ಸಲ್ಲಿಸಿ ಪರಿಹಾರ ಕೋರುವಂತೆ ತಿಳಿಸಿದ್ದಾರೆ.
10. ಕೃಷಿ ವಿಶ್ವವಿದ್ಯಾಲಯ, ವಿ.ಸಿ.ಫಾರಂ, ಮಂಡ್ಯ ಇವರು ದಿ.03.12.18 ರಂದು ಸಹಸಂಶೋಧನಾ ನಿರ್ದೇಶಕರು, ವಲಯ ಕೃಷಿ ಸಂಶೋಧನಾ ಕೇಂದ್ರ, ವಿ.ಸಿ.ಫಾರಂ, ಮಂಡ್ಯ ಇವರಿಗೆ ಪರಿಶೀಲನಾ ವರದಿ/ಎಕ್ಸ್.ಎ6 ಯನ್ನು ಸಲ್ಲಿಸುತ್ತಾ ದಿ:09.11.18ರಂದು ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕಿನ ಬೆಳಗುಂಬ, ಕಲ್ಯಾ, ಗಟ್ಟಿಪುರ, ಹುಲುವೇನಹಳ್ಳಿ, ಗವಿನಾಗಮಂಗಲ, ಅಜ್ಜನಹಳ್ಳಿ, ಏಸಪ್ಪನಹಳ್ಳಿ ಗ್ರಾಮಗಳ ರೈತರ ಸಮಸ್ಯಾತ್ಮಕ ರಾಗಿ ತಾಕುಗಳಿಗೆ ಭೇಟಿ ನೀಡಿ ಪರಶೀಲನೆ ಕೈಗೊಂಡು ಸಿದ್ಧಪಡಿಸಿದ ವರದಿಯನ್ನು ಮುಂದಿನ ಕ್ರಮಕ್ಕಾಗಿ ಸಲ್ಲಿಸಿದ್ದಾರೆ. ಸದರಿ ವರದಿಯಲ್ಲಿ ವಿಜ್ಞಾನಿಗಳ ಹಾಗೂ ಅಧಿಕಾರಿಗಳ ತಂಡದ ಹೆಸರು, ಪ್ರಸ್ತುತ ಪ್ರಕರಣದ ದೂರುದಾರರ ಹೆಸರು ಹಾಗೂ ಇನ್ನೂ ಎಂಟು ಜನ ರೈತರ ಹೆಸರುಗಳನ್ನು ನಮೂದಿಸಲಾಗಿದೆ. ದೂರುದಾರರ ಹೆಸರು, ಅವರ ಜಮೀನಿನ ವಿಸ್ತೀರ್ಣ 2.5 ಎಕರೆ, ತಳಿ ಎಂ.ಆರ್-6, ಪರಿಶೀಲಿಸಿದ ಅಂಶಗಳು 20 – 30% ಬೆರಕೆ ಎಂದು ನಮೂದಿಸಲಾಗಿದೆ. ದೂರುದಾರರ ಜೊತೆಗೆ ಇನ್ನೂ ಎಂಟು ರೈತರ ಸಮಸ್ಯಾತ್ಮಕ ರಾಗಿ ತಾಖುಗಳ ವಿವರಗಳನ್ನು ಸಹ ನಮೂದಿಸಿ ಈ ಕೆಳಕಂಡಂತೆ ವಿವರಿಸಿದ್ದಾರೆ:
ಈ ಮೇಲ್ಕಂಡ ತಾಖುಗಳಲ್ಲಿ ಎಂ.ಆರ್.-6 ಪ್ರಮಾಣೀಕೃತ ರಾಗಿ ತಳಿಗಳನ್ನು ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಸರಬರಾಜು ಮಾಡಲಾಗಿದ್ದು, ಜಿಲ್ಲಾ ಕೃಷಿ ಇಲಾಖೆಯ ಮುಖಾಂತರ ರೈತರಿಗೆ ವಿತರಿಸಲಾಗಿದೆ. ರೈತರು ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಬಿತ್ತನೆ ಕೈಗೊಂಡಿದ್ದು ಕ್ಷೇತ್ರ ಭೇಟಿಯ ಸಮಯದಲ್ಲಿ ಎಲ್ಲಾ ತಳಿಗಳು ಬಲಿಯುವ ಹಾಗು ಕಟಾವಿನ ಹಂತದಲ್ಲಿರುತ್ತವೆ. ಎಂ.ಆರ್-6 ತಳಿಯ ತಾಖುಗಳು ಸುಮಾರು ಶೇ.15 ರಿಂದ 50 ಹಾಗೂ 3-4 ವಿವಿಧ ಬೆರಕೆ ತಳಿಗಳಿಂದ ಮಿಶ್ರಣವಾಗಿದ್ದು ಅವುಗಳು ಈಗಾಗಲೇ ಕಟಾವಿಗೆ ಬಂದಿರುತ್ತದೆ ಹಾಗೂ ಎಂ.ಆರ್-6 ತಳಿಯು ಇನ್ನು ಹಾಲು ತುಂಬುವ ಹಂತದಲ್ಲಿರುತ್ತದೆ. ಕೆಲವು ತಾಖುಗಳಲ್ಲಿ ಬೆರಕೆ ರಾಗಿ ತಳಿಗಳು ಶೇಕಡ 40-50 ರಷ್ಟಿದ್ದು ವಿವಿಧ ಹಂತದಲ್ಲಿರುತ್ತದೆ. (ಹೂ ಬಂದಿರುವುದು, ಕಾಳು ಕಟ್ಟಿರುವುದು, ಕಟಾವಿಗೆ ಬಂದಿರುವುದು) ಇದರಿಂದ ರೈತರಿಗೆ ಏಕಕಾಲಕ್ಕೆ ಕಟಾವು ಮಾಡಲು ಸಾಧ್ಯವಾಗುವುದಿಲ್ಲ.
ಮೇಲ್ಕಂಡ ಎಲ್ಲಾ ರೈತರ ತಾಖುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿ ಎಂ.ಆರ್-6 ರಾಗಿ ತಳಿಯಲ್ಲಿ ಶೇ 15-50, 3 ರಿಂದ 4 ವಿವಿಧ ಬೆರಕೆಗಳಿಂದ ಕೂಡಿದೆ ಎಂದು ಈ ಮೂಲಕ ದೃಢೀಕರಿಸಲಾಗಿದೆ.
11. ಪ್ರಸ್ತುತ ಪ್ರಕರಣದಲ್ಲಿ ಎದುರುದಾರರು ಈ ಮೇಲ್ಕಂಡ ವರದಿಯನ್ನು ಅಲ್ಲಗಳೆದಿದ್ದರೂ ಕೂಡ ದಾಖಲೆ ಎಕ್ಸ್.ಎ6ನಲ್ಲಿನ ಲಿಖಿತ ಸಂಗತಿಗಳನ್ನು ಅಲ್ಲಗಳೆಯುವುದಕ್ಕೆ ಬರುವುದಿಲ್ಲ. ಅಲ್ಲದೆ ದೂರುದಾರರು ತನ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುಷ್ಟಿ ನೀಡುವ ಕುರಿತು ಶ್ರೀ ಭದ್ರಯ್ಯ ಸನ್ ಆಫ್ ಲೇಟ್ ರುದ್ರಯ್ಯ ಎಂಬುವವರನ್ನು ತನ್ನ ಪರವಾಗಿ ಸಾಕ್ಷಿಯನ್ನಾಗಿ ಮಾಡಿಸಿದ್ದಾರೆ. ಸದರಿ ಸಾಕ್ಷಿದಾರರು ಪ್ರಸ್ತುತ ಪ್ರಕರಣದಲ್ಲಿ ಪ್ರಮಾಣ ಪತ್ರ ಸಲ್ಲಿಸಿ ಆರು ದಾಖಲೆಗಳನ್ನು ಹಾಜರು ಪಡಿಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ದೂರುದಾರರು ವಿವರಿಸಿದ ಸಂಗತಿಗಳೇ ಸದರಿ ಸಾಕ್ಷಿದಾರರು ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಹಾಗೂ ಅವರು ಹಾಜರುಪಡಿಸಿದ ದಾಖಲೆ 1 ರಿಂದ 3 ರಲ್ಲಿ ಕಂಡು ಬರುತ್ತದೆ. ಕಾರಣ ದೂರುದಾರ ತನ್ನ ಪರವಾಗಿ ಸಾಕ್ಷಿಯಾಗಿ ಹಾಜರುಪಡಿಸಿದ ಸದರಿ ಸಾಕ್ಷಿದಾರರು ಸಲ್ಲಿಸಿದ ಸಂಗತಿಗಳು ದೂರುದಾರ ಹಾಕಿಕೊಂಡ ದೂರಿನ ಮೇಲೆ ಬೆಳಕು ಚೆಲ್ಲುತ್ತದೆ ಎಂದು ನಾವು ಅಭಿಪ್ರಾಯಕ್ಕೆ ಬಂದಿದ್ದೇವೆ.
12. ದೂರುದಾರ ತನ್ನ ದೂರಿನಲ್ಲಿ ಎದುರುದಾರರ ಮೇಲೆ ಮಾಡಿದ ಆಪಾದನೆಗಳನ್ನು ಎದುರುದಾರ ತನ್ನ ತಕರಾರಿನಲ್ಲಿ ಅಲ್ಲಗಳೆಯುತ್ತಾ ಹೋಗಿದ್ದು, ಆದರೆ ಅವರ ಪ್ರಕಾರ ವಾಸ್ತವ ಸಂಗತಿ ಏನು ಎಂಬುದನ್ನು ಈ ಪರಿಹಾರ ವೇದಿಕೆ ಮುಂದೆ ಮಂಡಿಸುವುದರಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ದೂರುದಾರ ಹಾಕಿಕೊಂಡ ದೂರಿನಲ್ಲಿನ ಸಂಗತಿಗಳು ಎಂದರೆ ಆತ ತನ್ನ ಜಮೀನಿನಲ್ಲಿ ರಾಗಿ ಬೆಳೆಯಲು ಎದುರುದಾರರ ಪ್ರತಿನಿಧಿಯಿಂದ ಖರೀದಿ ಮಾಡಿದ ಎಂ.ಆರ್-6 ಬಿತ್ತನೆ ರಾಗಿ ತಳಿಯಲ್ಲಿ ಶೇಕಡ 20 ರಿಂದ - 30 ಕಲಬೆರಕೆ ರಾಗಿ ಬೀಜಗಳು ಇದ್ದ ಸಂಗತಿ ಸ್ಪಷ್ಟವಾಗಿ ಕಂಡು ಬರುತ್ತದೆ.
13. ದೂರುದಾರ ತನ್ನ ದೂರಿನಲ್ಲಿ ತಾನು ಪ್ರತಿ ವರ್ಷ ಸದರಿ ಕೃಷಿ ಜಮೀನಿನಲ್ಲಿ 45 ಕ್ವಿಂಟಾಲ್ ರಾಗಿ ಬೆಳೆಯುತ್ತಿದ್ದು 2018ನೇ ಸಾಲಿನಲ್ಲಿ ಕೇವಲ 18 ಕ್ವಿಂಟಾಲ್ ರಾಗಿ ಬೆಳೆ ಬಂದಿದ್ದು ಸುಮಾರು 27 ಕ್ವಿಂಟಾಲ್ ರಾಗಿ ಇಳುವರಿ ಕಡಿಮೆ ಬಂದಿದ್ದು, ನಷ್ಟವಾಗಿದೆ ಎಂದು ತಿಳಿಸುತ್ತಾರೆ. ಸರ್ಕಾರ 2018-19ರ ಸಾಲಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ.2,897/- ನಿಗದಿಪಡಿಸಿದ್ದಾರೆ. ಅದರಂತೆ 27 ಕ್ವಿಂಟಾಲ್ ರಾಗಿಗೆ ಪ್ರತಿ ಕ್ವಿಂಟಾಲ್‌ಗೆ ರೂ.2,897/- ರಂತೆ ರೂ.78,219/- ನಷ್ಟವಾಗಿದೆ ಎಂದು ತಿಳಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಎದುರುದಾರ ತನ್ನ ತಕರಾರಿನ ಪ್ಯಾರಾ 10ರಲ್ಲಿ ದೂರುದಾರ ಅಂದುಕೊಂಡಂತೆ ಅವರ 2 ಎಕರೆ 36 ಗುಂಟೆಯಲ್ಲಿ ಪ್ರತಿ ವರ್ಷ 45 ಕ್ವಿಂಟಾಲ್ ರಾಗಿ ಬೆಳೆಯುತ್ತಿದ್ದುದು ನಿಜವಿರುವುದಿಲ್ಲ ಹಾಗೂ ಎಂ.ಆರ್-6 ಬಿತ್ತನೆ ರಾಗಿಯಿಂದ ಎಕರೆಗೆ 10 ರಿಂದ 12 ಕ್ವಿಂಟಾಲ್ ರಾಗಿ ಮಾತ್ರ ಬೆಳೆಯಲು ಸಾಧ್ಯ ಎಂದು ತಿಳಿಸಿದ್ದು ಆ ಬಗ್ಗೆ ಯಾವುದೇ ಪೂರಕ ದಾಖಲೆಗಳನ್ನು ಒದಗಿಸಿರುವುದಿಲ್ಲ. ಮುಂದುವರೆದು, ಎದುರುದಾರರು 2018ರ ಸಾಲಿನಲ್ಲಿ ಮುಂಗಾರು ಮಳೆಯು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಆಗಿದೆ ಆ ಕಾರಣಕ್ಕಾಗಿ ದೂರುದಾರರ ಜಮೀನಿನಲ್ಲಿ ಫಸಲು ಕಡಿಮೆ ಬಂದಿದ್ದು ದೂರುದಾರ ಅಂದುಕೊಂಡಂತೆ ಫಸಲು ಕಡಿಮೆ ಬರಲು ಎಂ.ಆರ್-6 ಬಿತ್ತನೆ ರಾಗಿ ಬೀಜ ಕಾರಣ ಅಲ್ಲ ಎಂದು ತಿಳಿಸಿದ್ದಾರೆ. ಸದರಿ ಸಂಗತಿ ಕಟ್ಟುಕತೆ ಎಂದು ತೋರಿಸುವ ಬಗ್ಗೆ ದೂರುದಾರ ದಾಖಲೆ ಎಕ್ಸ್.ಎ14 ಹಾಜರುಪಡಿಸಿದ್ದು ಅದು 31.12.2018 ಕ್ಕೆ ರಾಮನಗರ ಜಿಲ್ಲೆಯಲ್ಲಿ ಆದ ಮಳೆ ಪ್ರಮಾಣವನ್ನು ತೋರಿಸುತ್ತದೆ. ಸದರಿ ದಾಖಲೆಯನ್ನು ಕೆ.ಎಸ್.ಎನ್. ಡಿ.ಎಂ.ಸಿ ಯು ನೀಡಿದ್ದು ಅದನ್ನು ಪರಿಶೀಲಿಸಲಾಗಿ “ವಾರ್ಷಿಕ ಮಳೆ ಪ್ರಮಾಣ 2018 (1ನೇ ಜನವರಿಯಿಂದ 31ನೇ ಡಿಸೆಂಬರ್‌ವರೆಗೆ)” ರಲ್ಲಿ ಮಳೆ ಪ್ರಮಾಣವು ಉತ್ತಮವಾಗಿದೆ ಎಂದು ಕಂಡು ಬರುತ್ತದೆ. ಆದ್ದರಿಂದ, ಎದುರುದಾರ ತೆಗೆದುಕೊಂಡ ಸಂಗತಿ ಎಂದರೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಮಳೆ ಆಗಿದ್ದೇ ಇಳುವರಿ ಕಡಿಮೆ ಆಗಲು ಕಾರಣ ಎಂಬುದನ್ನು ಒಪ್ಪಲು ಅಸಾಧ್ಯ.
14. ದೂರುದಾರ ತನ್ನ ದೂರಿನಲ್ಲಿ ರಾಗಿ ಬೆಳೆಯಲು ಜಮೀನಿಗೆ ಖರ್ಚು ಮಾಡಿರುವ ಖರ್ಚಿನ ಬಗ್ಗೆ ನಾವು ಈಗಾಗಲೇ ಈ ಆದೇಶದ ಪ್ಯಾರಾ 2ರಲ್ಲಿ ವಿವರಿಸಿದ್ದೇವೆ. ದೂರುದಾರರ ಪ್ರಕಾರ ಆತನಿಗೆ 27 ಕ್ವಿಂಟಾಲ್ ರಾಗಿ ಫಸಲು/ಇಳುವರಿ ನಷ್ಟವಾಗಿದ್ದು ಬೆಂಬಲ ಬೆಲೆಯ ಪ್ರಕಾರ ರೂ.78,219/- ರಷ್ಟು ನಷ್ಟ ಉಂಟಾಗಿದೆ ಎಂದು ತಿಳಿಸುತ್ತಾರೆ. ಪ್ರತಿ ವರ್ಷ ಆತ ತನ್ನ 2 ಎಕರೆ 36 ಗುಂಟೆಯಲ್ಲಿ 45 ಕ್ವಿಂಟಾಲ್ ರಾಗಿ ಬೆಳೆಯುತ್ತೇನೆ ಎನ್ನುವ ಬಗ್ಗೆ ಯಾವುದೇ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ. ಹಾಗೆಯೇ ಎದುರುದಾರ ಕೂಡ ಎಂ.ಆರ್-6 ಬಿತ್ತನೆ ರಾಗಿ ತಳಿಯಿಂದ 1 ಎಕರೆಗೆ 10ರಿಂದ 12 ಕ್ವಿಂಟಾಲ್ ಇಳುವರಿ ಮಾತ್ರ ಬರುತ್ತದೆ ಎಂಬ ಬಗ್ಗೆ ದಾಖಲೆ ಹಾಜರು ಪಡಿಸಿರುವುದಿಲ್ಲ. ಆದ್ದರಿಂದ, ದೂರುದಾರ ತನ್ನ 2 ಎಕರೆ 36 ಗುಂಟೆಯಲ್ಲಿ 45 ಕ್ವಿಂಟಾಲ್ ರಾಗಿ ಬೆಳೆಯುತ್ತಿದ್ದ ಎನ್ನುವ ಸಂಗತಿಯನ್ನು ಅಲ್ಲಗಳೆಯಲು ಬರುವಂತಿಲ್ಲ. 2 ಎಕರೆ 36 ಗುಂಟೆ ಜಮೀನನ್ನು 3 ಎಕರೆ ಎಂದು ಪರಿಗಣಿಸಿ, ಎಕರೆಗೆ 15 ಕ್ವಿಂಟಾಲ್ ಇಳುವರಿಯಂತೆ 3 ಎಕರೆಗೆ 45 ಕ್ವಿಂಟಾಲ್ ರಾಗಿ ಇಳುವರಿ ಬರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದೇವೆ. ಎದುರುದಾರರ ಪ್ರಕಾರ ಎಕರೆಗೆ 12 ಕ್ವಿಂಟಾಲ್ ರಾಗಿ ಇಳುವರಿ ಬರುತ್ತದೆ ಎಂದು ಪರಿಗಣಿಸಿದರೆ, ವ್ಯತ್ಯಾಸ ಎಕರೆಗೆ 3 ಕ್ವಿಂಟಾಲ್ ಆಗುತ್ತದೆ. ರಾಮನಗರ ಜಿಲ್ಲೆಯ ಕೃಷಿ ಜಮೀನುಗಳು ಅತ್ಯಂತ ಫಲವತ್ತೆಯಿಂದ ಕೂಡಿದೆ ಎಂದು ಕಂಡು ಬಂದಿದ್ದು ಆ ಬಗ್ಗೆ ಈ ವೇದಿಕೆ ನ್ಯಾಯಿಕ ನಿರ್ಣಯ (judicial note) ತೆಗೆದುಕೊಂಡಿದ್ದು, ಪ್ರತಿ ಎಕರೆಗೆ 15 ಕ್ವಿಂಟಾಲ್ ರಾಗಿ ಇಳುವರಿ ಬರುತ್ತದೆ ಎಂದು ಅಭಿಪ್ರಾಯ ಪಟ್ಟು, 3 ಎಕರೆಗೆ 45 ಕ್ವಿಂಟಾಲ್ ರಾಗಿ ಇಳುವರಿ ಬರುತ್ತದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದೇವೆ. 2018ರಲ್ಲಿ ಕಲಬೆರೆಕೆ ಬಿತ್ತನೆ ರಾಗಿಯಿಂದ ಕೇವಲ 18 ಕ್ವಿಂಟಾಲ್ ರಾಗಿ ಇಳುವರಿ ಬಂದಿದ್ದು 27 ಕ್ವಿಂಟಾಲ್‌ನಷ್ಟು ಕಡಿಮೆ ಇಳುವರಿ ಬಂದಿದೆ ಅನ್ನುವ ಸಂಗತಿಯನ್ನು ಕೂಡ ಎದುರುದಾರರು ನಿರ್ಧಿಷ್ಟವಾಗಿ ಅಲ್ಲಗಳೆದಿಲ್ಲ. ಆದ್ದರಿಂದ, ಈ 27 ಕ್ವಿಂಟಾಲ್ ನಷ್ಟಕ್ಕೆ ನಾವು ಪರಿಹಾರ ಕೊಡಬೇಕಾದ ಬಗ್ಗೆ ನಿರ್ಧರಿಸಬೇಕಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಗ್ರಾಹಕ ಆಯೋಗದ ತೀರ್ಪನ್ನು ಉಲ್ಲೇಖಿಸುವುದು ಸೂಕ್ತ. ಆ ತೀರ್ಪು ಈ ಕೆಳಗಿನಂತಿದೆ:
2019 (4) CPR 464 (NC) in the case of Devendra Kumar Marwah & Anr., vs. M/s.Nandan Agro Farms Pvt., Ltd., First Appeal no.324/2010, dtd.18.07.19, wherein it reads thus:
Consumer Protection Act, 1986 – Sec.19 – First Appeal by the OP – dismissed for default – Complainant entitled for the enhanced compensation – Complainants entered in to an MOU with the OP – all instructions were followed – no germination of the said fingers in special nursery – lump sump amount is being awarded as compensation – Complainant for the loss of crop – appeal allowed (paras 2,3,5, & 9)
Important Point:
Crop miserably failed because of defective wet material provided by the OP and no timely proper instructions.
15. ಮೇಲೆ ಉಲ್ಲೇಖಿಸಿದ ತೀರ್ಪಿನ ಮಾನದಂಡದ ಅಡಿಯಲ್ಲಿ, ಪ್ರಸ್ತುತ ಪ್ರಕರಣದಲ್ಲಿ ದೂರುದಾರನಿಗೆ 27 ಕ್ವಿಂಟಾಲ್ ಕಡಿಮೆ ಇಳುವರಿಯಿಂದಾದ ನಷ್ಟವನ್ನು ಪರಿಗಣಿಸಿ, ಪ್ರತಿ ಕ್ಟಿಂಟಾಲ್‌ಗೆ ರೂ.2,897/-ರಂತೆ ಬೆಂಬಲ ಬೆಲೆಯನ್ನು ತೆಗೆದುಕೊಂಡಲ್ಲಿ ಆತನಿಗೆ ರೂ.78,219/-ರಷ್ಟು ನಷ್ಟವಾಗಿರುತ್ತದೆ. ಬೆಂಬಲ ಬೆಲೆಯನ್ನು ನಿರ್ಧರಿಸುವ ಕಾಲಕ್ಕೆ ರಾಗಿ ಬೆಳೆಯಲು ಉಳುಮೆ, ಕೂಲಿ, ರಸಗೊಬ್ಬರ ಇತ್ಯಾದಿ ಕೆಲಸಗಳಿಗಾಗಿ ಮಾಡಿದ ಖರ್ಚನ್ನು ಕೂಡ ಪರಿಗಣನೆಗೆ ತೆಗೆದುಕೊಂಡು ಬೆಂಬಲ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ ರೂ.78,219/- ನಷ್ಟ ಪರಿಹಾರದ ಹಣಕ್ಕೆ ದೂರುದಾರ ಅರ್ಹನಿದ್ದಾನೆ ಎಂಬ ಅಭಿಪ್ರಾಯಕ್ಕೆ ನಾವು ಬಂದಿದ್ದೇವೆ. ಉಳಿದಂತೆ ಮಾನಸಿಕ ಹಾಗೂ ದೈಹಿಕ ತೊಂದರೆ ಅನುಭವಿಸಿದ್ದಕ್ಕೆ ರೂ.50,000/- ಪರಿಹಾರ ಕೇಳಿದ್ದು, ನಮ್ಮ ಅನಿಸಿಕೆ ಪ್ರಕಾರ ದೂರುದಾರ ದೂರನ್ನು ಸ್ವತಃ ತಾನೇ ದಾಖಲಿಸಿದ್ದು ಆ ಕಾರಣಕ್ಕಾಗಿ ದೂರದ ಊರಿನಿಂದ ಬೆಂಗಳೂರಿನ ಈ ವೇದಿಕೆಗೆ ಬಂದು ಸ್ವತಃ ತಾನೇ ಪ್ರಕರಣವನ್ನು ನಡೆಸಿ ಮಾನಸಿಕವಾಗಿಯೂ ದೈಹಿಕವಾಗಿಯೂ ತೊಂದರೆ ಅನುಭವಿಸಿದ್ದು ನಮ್ಮ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ರೂ.50,000/- ಕ್ಕೆ ಬದಲಾಗಿ ರೂ.10,000/- ಪರಿಹಾರಕ್ಕೆ ಅರ್ಹನಿದ್ದಾನೆ ಎಂದು ಅಭಿಪ್ರಾಯಕ್ಕೆ ಬಂದಿದ್ದೇವೆ. ಪ್ರಕರಣ ದಾಖಲಿಸಲು ಓಡಾಟದ ಸಲುವಾಗಿ ಆದ ಖರ್ಚಿಗೆ ರೂ.40,000/- ಪರಿಹಾರ ಕೇಳಿದ್ದು ಅಷ್ಟೊಂದು ಸಮಂಜಸವಲ್ಲ ಎಂದು ಅಭಿಪ್ರಾಯ ಪಟ್ಟ ನಾವು ವ್ಯಾಜ್ಯದ ಖರ್ಚು ರೂ.5,000/- ಕ್ಕೆ ಅರ್ಹನಿದ್ದಾನೆ ಎಂದು ತಿಳಿಸುತ್ತಾ, ನಾವು ಅಂಶ (1)ಕ್ಕೆ ಸಕಾರಾತ್ಮಕವಾಗಿ ಉತ್ತರಿಸಿದ್ದೇವೆ.
16. ಈ ತೀರ್ಪನ್ನು ಮುಕ್ತಾಯ ಮಾಡುವ ಪೂರ್ವದಲ್ಲಿ ನಮ್ಮ ಗಮನಕ್ಕೆ ಬಂದ ಇನ್ನೊಂದು ಸಂಗತಿ ಎಂದರೆ, ಪ್ರಸ್ತುತ ಪ್ರಕರಣದಲ್ಲಿ ದೂರುದಾರರ ಪರವಾಗಿ ಸಾಕ್ಷಿದಾರರಾಗಿ ಶ್ರೀ ಭದ್ರಯ್ಯ ಹಾಜರಿದ್ದು, ಪ್ರಮಾಣ ಪತ್ರ ಹಾಗೂ ದಾಖಲೆಗಳನ್ನು (ದಾಖಲೆ.1 ರಿಂದ 5) ಹಾಜರು ಪಡಿಸಿದ್ದಾರೆ. ಸದರಿ ಸಾಕ್ಷಿದಾರರು ತಾನು ಹಾಜರುಪಡಿಸಿದ ಸದರಿ ಪ್ರಮಾಣ ಪತ್ರ ಹಾಗೂ ದಾಖಲೆಗಳಲ್ಲಿ ದೂರುದಾರರು ಹೇಳಿಕೊಂಡ ಸಂಗತಿಗಳೇ ಇದ್ದು ತನಗೂ ಕೂಡ ಪರಿಹಾರ ಕೊಡಿಸಬೇಕೆಂದು ಕೋರಿದ್ದಾರೆ. ಆದ್ದರಿಂದ ನಾವು ದೂರುದಾರ ಹಾಗೂ ದೂರುದಾರರಂತೆ ಪರಿಹಾರಕ್ಕೆ ಅರ್ಹರಾದ ನೊಂದ ರೈತರುಗಳು (ಎಕ್ಸ್.ಎ6, ಎಕ್ಸ್.ಎ13, ದಾಖಲೆ.3 ರಲ್ಲಿ ನಮೂದಿಸಿದ ರೈತರ ಹೆಸರುಗಳು) ಈ ದೂರಿನ ಅಧಿಕೃತ ನಕಲನ್ನು ಪಡೆದು ತಮ್ಮ ತಮ್ಮ ಸೂಕ್ತ ದಾಖಲೆಗಳೊಂದಿಗೆ ಎದುರುದಾರರಿಗೆ ಮನವಿಯನ್ನು ಸಲ್ಲಿಸಿ ಪರಿಹಾರ ಪಡೆಯಬೇಕೆಂದು ನ್ಯಾಯದ ದೃಷ್ಟಿಯಿಂದ ಈ ತೀರ್ಮಾನಕ್ಕೆ ಬಂದಿದ್ದೇವೆ. ಈ ಪ್ರಕರಣದಲ್ಲಿ ದಾಖಲೆ ಎಕ್ಸ್.ಎ6, ಎಕ್ಸ್.ಎ13 ಮತ್ತು ದಾಖಲೆ.3ರಲ್ಲಿ ನಮೂದಿಸಿದ ರೈತರುಗಳಿಗೆ ಕೊಡಬೇಕಾದ ಪರಿಹಾರವನ್ನು ಈ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸದಿದ್ದರೂ ಕೂಡ ನ್ಯಾಯದ ಹಾಗೂ ಮಾನವೀಯ ದೃಷ್ಟಿಯಿಂದ ಈ ತೀರ್ಪಿನಲ್ಲಿ ಉಲ್ಲೇಖಿಸಿದ ಮಾನದಂಡವನ್ನು ಆಧಾರವಾಗಿಟ್ಟುಕೊಂಡು ಪರಿಹಾರ ಕೊಡಬೇಕೆಂದು ಎದುರುದಾರರಿಗೆ ಆದೇಶಿಸಿದ್ದೇವೆ.
17. ಅಂಶ 2: - ಅಂಶ (1)ರ ಮೇಲೆ ನಾವು ಕೊಟ್ಟ ಕಾರಣಗಳಿಗಾಗಿ ಈ ಕೆಳಕಂಡಂತೆ ಆದೇಶ ಮಾಡುತ್ತೇವೆ.
ಆದೇಶ
ದೂರುದಾರರು ಹಾಕಿಕೊಂಡ ದೂರನ್ನು ಭಾಗಶಃ ಅಂಗೀಕರಿಸಲಾಗಿದೆ.
2. ಎದುರುದಾರರು ದೂರುದಾರರಿಗೆ ಬೆಳೆ ನಷ್ಟದ ಪರಿಹಾರ ರೂ.78,219/-, ಮಾನಸಿಕ ಹಾಗೂ ದೈಹಿಕ ತೊಂದರೆಗೆ ಪರಿಹಾರ ರೂ.10,000/-, ವ್ಯಾಜ್ಯದ ಖರ್ಚು ರೂ.5,000/- ಒಟ್ಟು ರೂ.93,219/-ನ್ನು ಈ ಆದೇಶ ತಲುಪಿದ ದಿನಾಂಕದಿಂದ ಆರು ವಾರದ ಒಳಗೆ ನೀಡಬೇಕೆಂದು ಆದೇಶಿಸಿದೆ. ತಪ್ಪಿದಲ್ಲಿ ಒಟ್ಟು ಪರಿಹಾರ ರೂ.93,219/-ರ ಜೊತೆಗೆ ಬೆಳೆ ನಷ್ಟದ ಪರಿಹಾರ ರೂ.78,219/- ರ ಮೇಲೆ ವಾರ್ಷಿಕ ಬಡ್ಡಿ 6% ಅನ್ನು ಈ ದೂರು ಸಲ್ಲಿಸಿದ ದಿನಾಂಕದಿಂದ ಪರಿಹಾರ ಪಾವತಿ ಮಾಡುವವರೆಗೆ ಕೊಡಬೇಕೆಂದು ಆದೇಶಿಸಿದೆ.
ತೀರ್ಪಿನ ಪ್ರತಿಯನ್ನು ದೂರುದಾರರು ಮತ್ತು ಎದುರುದಾರರಿಗೆ/ಪ್ರತಿವಾದಿಗಳಿಗೆ ಉಚಿತವಾಗಿ ಕಳುಹಿಸತಕ್ಕದ್ದು.
(ಈ ಆದೇಶವನ್ನು ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ ಲಿಪ್ಯಂತರಿಸಿ ಗಣಕೀಕರಣದಲ್ಲಿ ಬೆರಳಚ್ಚಿಸಿ ಸದರಿ ಆದೇಶವನ್ನು ತಿದ್ದುಪಡಿ ಮಾಡಿ ದಿನಾಂಕ 20ನೇ ಜನವರಿ 2020ರಂದು ತೀರ್ಪನ್ನು ವೇದಿಕೆಯ ಮುಂದೆ ಉಚ್ಛರಿಸಲಾಗಿರುತ್ತದೆ.)
-:ಅನುಬಂಧಗಳು:-
1) ಪ್ರಮಾಣ ಪತ್ರದ ಮೂಲಕ ದೂರುದಾರರ ಪರವಾಗಿ ಪರಿಶೀಲಿಸಿದ ಸಾಕ್ಷಿಗಳು 14.05.19, 05.12.19
ಶ್ರೀ ನರಸೇಗೌಡ, ದೂರುದಾರರು ಇವರ ಸಾಕ್ಷ್ಯವನ್ನು ಪರೀಕ್ಷಿಸಿಲಾಯಿತು.
ಶ್ರೀ ಭದ್ರಯ್ಯ, ಇವರ ಸಾಕ್ಷ್ಯವನ್ನು ಪರೀಕ್ಷಿಸಿಲಾಯಿತು.
2) ದೂರುದಾರರ ಪರವಾಗಿ ಸಲ್ಲಿಸಿದ ದಾಖಲೆಯ ಪ್ರತಿಗಳು : -
ಎಕ್ಸ್.ಎ1 | ರಾಗಿ ಖರೀದಿ ಬಿಲ್ಲು ದಿ:19.06.18 ರೂ.500/- |
ಎಕ್ಸ್.ಎ2 & ಎ3 | ಜಮೀನಿನ ಪಹಣಿಗಳು |
ಎಕ್ಸ್.ಎ4 | ಬೆಳೆ ಪರಿಶೀಲನಾ ವೇಳೆಯ ವಿಜ್ಞಾನಿಗಳ ತಂಡದ ಫೋಟೋ |
ಎಕ್ಸ್.ಎ5 | ವಿಜ್ಞಾನಿಗಳ ಬೆಳೆ ಪರಿಶೀಲನಾ ವರದಿ ದಿ:20.12.18 |
ಎಕ್ಸ್.ಎ6 | ಕೃಷಿ ವಿಶ್ವ ವಿದ್ಯಾನಿಲಯದ ಪತ್ರ ದಿ:03.12.18 |
ಎಕ್ಸ್.ಎ7 | ಆಧಾರ್ ಕಾರ್ಡು |
ಎಕ್ಸ್.ಎ8 | ಮತದಾರರ ಗುರುತಿನ ಚೀಟಿ |
ಎಕ್ಸ್.ಎ9 | ಕನಿಷ್ಠ ಬೆಂಬಲ ಬೆಲೆ ಯೋಜನೆ 2018.19ರ ಪ್ರತಿ |
ಎಕ್ಸ್.ಎ10 | ರೇಷನ್ ಕಾರ್ಡು |
ಎಕ್ಸ್.ಎ11 | ಮಾನ್ಯ ಮುಖ್ಯಮಂತ್ರಿಯವರ ಸಚಿವಾಲಯದಿಂದ ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಪತ್ರ ದಿ:27.11.18 |
ಎಕ್ಸ್.ಎ12 | ಸಹಾಯಕ ಕೃಷಿ ನಿರ್ದೇಶಕರಿಗೆ ನೀಡಿರುವ ಅರ್ಜಿ ದಿ:05.10.18 |
ಎಕ್ಸ್.ಎ13 | ಸಹಾಯಕ ಕೃಷಿ ನಿರ್ದೇಶಕರ ಪತ್ರ ದಿ:09.05.19 |
ಎಕ್ಸ್.ಎ14 | ಮಳೆಯ ವಿವರ 31.12.18ರವರೆಗೆ |
ಎಕ್ಸ್.ಎ15 | ನಮೂನೆ 2 – ಕರಾಬೀನಿನಿ, ಬೆಂಗಳೂರು |
3) ಶ್ರೀ ಭದ್ರಯ್ಯ, ಇವರು ಸಲ್ಲಿಸಿದ ದಾಖಲೆಯ ಪ್ರತಿಗಳು : -
ದಾಖಲೆ.1 | ಸಹಾಯಕ ಕೃಷಿ ನಿರ್ದೇಶಕರ ಪತ್ರ ದಿ:20.12.18 |
ದಾಖಲೆ.2 | ಕೃಷಿ ವಿಶ್ವವಿದ್ಯಾನಿಲಯದ ಪತ್ರ ದಿ:13.11.18 |
ದಾಖಲೆ.3 | ವಿಜ್ಞಾನಿಗಳ ಬೆಳೆ ಪರಿಶೀಲನಾ ವರದಿ ದಿ:30.10.18 |
ದಾಖಲೆ.4 | ಜಮೀನಿನ ಪಹಣಿಗಳು |
ದಾಖಲೆ.5 | ಆಧಾರ್ ಕಾರ್ಡು |
4) ಪ್ರಮಾಣ ಪತ್ರದ ಮೂಲಕ ಎದುರುದಾರರ ಪರವಾಗಿ ಪರಿಶೀಲಿಸಿದ ಸಾಕ್ಷಿಗಳು, 16.09.19
ಶ್ರೀ ಬಿ.ಹೆಚ್.ಪ್ರಕಾಶ್, ಮ್ಯಾನೇಜರ್ ಇವರ ಸಾಕ್ಷ್ಯವನ್ನು ಪರೀಕ್ಷಿಸಿಲಾಯಿತು.
5) ಎದುರುದಾರರ ಪರವಾಗಿ ಸಲ್ಲಿಸಿದ ದಾಖಲೆಯ ಪ್ರತಿಗಳು :-