ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು
ಉಪಸ್ಥಿತಿ: 1. ಶ್ರೀ ಕೆ.ಎಸ್.ಬೀಳಗಿ, ಅಧ್ಯಕ್ಷರು,
2. ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ, ಮಹಿಳಾ ಸದಸ್ಯರು,
3. ಶ್ರೀ ಹೆಚ್.ಜನಾರ್ಧನ್, ಸದಸ್ಯರು
ಆದೇಶ
ಸಿ.ಸಿ.ಸಂಖ್ಯೆ:13/2022
ಆದೇಶ ದಿನಾಂಕ 06ನೇ ಅಕ್ಟೋಬರ್ 2022
ಶ್ರೀಮತಿ ನೀತು ಅಗರ್‍ವಾಲ್,
47 ವರ್ಷ,
ಎಫ್‍ಡಿ-205, ಎಫ್‍ಡಿ ಬ್ಲಾಕ್, ಸೆಕ್ಟಾರ್ 3,
ಬಿದನನಗರ, ಕಲ್ಕತ್ತ 700 106,
ವೆಸ್ಟ್ ಬೆಂಗಾಲ್
(ಪಾರ್ಟಿ ಇನ್ ಪರ್ಸನ್)
-ಪಿರ್ಯಾದುದಾರರು
ವಿರುದ್ಧ
ಅಮೆಜಾನ್ ಡೆವಲಪ್‍ಮೆಂಟ್ ಸೆಂಟರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್,
ವೈಸ್ ಪ್ರಸಿಡೆಂಟ್ ಮತ್ತು ಕಂಟ್ರಿ ಮ್ಯಾನೇಜರ್:ಇಂಡಿಯಾ ಕನ್ಸೂಮರ್ ಬಿಸ್‍ನೆಸ್,
ಬ್ರಿಗೆಡ್ ಗೇಟ್‍ವೇ 8ನೇ ಫ್ಲೋರ್ 26/1, ಡಾ.ರಾಜಕುಮಾರ್ ರಸ್ತೆ, ಮಲ್ಲೆಶ್ವರಂ ವೆಸ್ಟ್, ಬೆಂಗಳೂರು 560 055.
… ಎದುರುದಾರರು
ಶ್ರೀಮತಿ ರೇಣುಕಾದೇವಿ ದೇಶ್‍ಪಾಂಡೆ
ಮಹಿಳಾ ಸದಸ್ಯರು,
1. ದೂರುದಾರರು ಎದುರುದಾರರ ಮೇಲೆ ಗ್ರಾಹಕರ ಸಂರಕ್ಷಣಾ ಕಾಯ್ದೆ 2019ರ ಕಲಂ 35 ರ ಅಡಿಯಲ್ಲಿ ದೂರನ್ನು ಸಲ್ಲಿಸಿದ್ದು, ಈ ಕೆಳಗಿನಂತೆ ಆದೇಶಿಸಲು ಕೋರಿರುತ್ತಾರೆ.
ಲ್ಯಾಪ್‍ಟಾಪ್ ಖರೀದಿಯ ಹಣ ರೂ.31,990/- ಗಳನ್ನು ಮರುಪಾವತಿಸುವಂತೆ ಶೇಕಡ 18ರ ಬಡ್ಡಿಯೊಂದಿಗೆ ಲ್ಯಾಪ್‍ಟಾಪ್ ಹಿಂದಿರುಗಿಸಿದ ದಿನಾಂಕದಿಂದ ಪರಿಹಾರ ಸಿಗುವವರೆಗೆ ಎದುರುದಾರರಿಗೆ ನಿರ್ದೇಶಿಸಬೇಕೆಂದು ಮತ್ತು ಕಿರುಕುಳ ಹಾಗೂ ಮಾನಸಿಕ ಸಂಕಟಕ್ಕೆ ಅಮೆಜಾನ್‍ನಿಂದ ಕ್ಷಮೆ ಯಾಚಿಸುವ ಪತ್ರದೊಂದಿಗೆ, ಇತರೆ, ಯಾವುದಾದರು ಪರಿಹಾರ ಇದ್ದರೆ ಕೊಡಿಸಿಕೊಡಬೇಕೆಂದು ಕೋರಿರುತ್ತಾರೆ.
2. ದೂರುದಾರನ ದೂರಿನ ಅಂಶಗಳು ಈ ಕೆಳಗಿನಂತೆ ಇರುತ್ತವೆ:-
ದೂರುದಾರರನು ಈಕಾಮರ್ಸ್ ವೆಬ್‍ಸೈಟ್ ಅಮೆಜಾನ್‍ನಿಂದ ದಿನಾಂಕ 20.09.2017ರಂದು ಡೆಲ್ ಬ್ರ್ಯಾಂಡ್‍ನ ಲ್ಯಾಪ್‍ಟಾಪ್ ಅನ್ನು ಆದೇಶ ಮಾಡಿ ಖರೀದಿಸಿ ಕಾರ್ಡ್ ಮೂಲಕ ರೂ.31,999/- ಹಣವನ್ನು ಆನ್‍ಲೈನ್ ಮೂಲಕ ಪಾವತಿಸಿದ್ದು, ಇದಕ್ಕೆ ಪ್ರತಿಯಾಗಿ ಅಮೆಜಾನ್‍ನಿಂದ ಪಡೆದು ದೃಢೀಕರಣದ ಪ್ರಕಾರ ಲ್ಯಾಪ್‍ಟಾಪ್ ಅನ್ನು 20.09.2017ರಂದು ಕಳುಹಿಸಲಾಗಿದೆ ಎಂದು ಲ್ಯಾಪ್‍ಟಾಪ್ ರಶೀದಿಯನ್ನು ಪಡೆದ ನಂತರ ಬಾಕ್ಸ್ ಸ್ಥಿತಿ ಉತ್ತಮವಾಗಿಲ್ಲವೆಂದು ಗಮನಿಸಿ ಬದಲಿಸಲಿಕ್ಕಾಗಿ ಸಲ್ಲಿಸಿದ್ದು, ಹೊಸ ಬದಲಿ ಆದೇಶವನ್ನು 27.09.2017ರಂದು ಕಳುಹಿಸಿದ್ದಾರೆ ಎದುರುದಾರರು. ಬದಲಿಸಿದ ಲ್ಯಾಪ್‍ಟಾಪ್‍ನಲ್ಲಿ ಸಮಸ್ಯೆಗಳು ಇದ್ದು, ಅದನ್ನು ದಿನಾಂಕ 06.10.2017ರಂದು ಹಿಂದಿರುಗಿಸಲಾಗಿದ್ದು, ಅದನ್ನು ಎದುರುದಾರರು ಸ್ವೀಕರಿಸಲಿಲ್ಲ ಎಂದು ತಿಳಿದು ಮತ್ತೆ ಅದನ್ನು 07.10.2017 ಕಳುಹಿಸಲಾಗಿ ಅಂತಿಮವಾಗಿ ದಿನಾಂಕ 10.11.2017ರಂದು ಅಮೆಜಾನ್‍ಗೆ ತಲುಪಿದೆ ಎಂದು ಎಂದು ಟ್ರ್ಯಾಕ್ ಮೂಲಕ ದೃಢಪಡಿಸಿದರೂ ಸಹ ಎದುರುದಾರರು ಹಣವನ್ನು ಮರುಪಾವತಿಸದೆ, ನಿರಂತರ ಫಾಲೋಅಪ್ ಮಾಡಿದರೂ ಸಹ ಯಾವುದೇ ಪ್ರತಿಕ್ರಯಿಸದೇ ಅಕ್ಟೋಬರ್ 2017ರಿಂದ ಡಿಸೆಂಬರ್ 2021ರವರೆಗೆ ಚಾಟ್ ಮತ್ತು ಮೇಲ್ ಮೂಲಕ ಅಮೆಜಾನ್ ನೊಂದಿಗೆ ನಿರಂತರವಾದ ಅನುಸರಣೆಯನ್ನು ಮಾಡಿದರೂ ಯಾವುದಕ್ಕೂ ಪ್ರತಿಕ್ರಯಿಸದೇ ಪ್ರತಿಬಾರಿ ಸಮಸ್ಯೆಯನ್ನು ಅನಗತ್ಯವಾಗಿ ಬೆಳೆಯುತ್ತಾ ಹೋಗಿದ್ದು ಇದರಿಂದ ಯಾವುದೇ ಪರಿಹಾರ ಸಿಗದೆ ಮಾನಸಿಕವಾಗಿ ನೊಂದು ಉದ್ದೇಶ ಪೂರ್ವಕವಾಗಿ ಸೇವಾ ನ್ಯೂನತೆಯನ್ನು ಎಸಗಿದ್ದಾರೆಂದು ಈ ಆಯೋಗಕ್ಕೆ ದೂರು ಸಲ್ಲಿಸಿದ್ದು, ಎದುರುದಾರರಿಂದ ಪರಿಹಾರ ಕೊಡಿಸಬೇಕೆಂದು ಪ್ರಾರ್ಥಿಸಿರುತ್ತಾರೆ.
3. ದೂರುದಾರರು ಕೊಟ್ಟ ದೂರನ್ನು ನೊಂದಾಯಿಸಿಕೊಂಡು ಎದುರುದಾರನಿಗೆ ನೋಟೀಸು ನೀಡಲಾಗಿ ಸದರಿ ನೋಟೀಸು ಜಾರಿಯಾಗಿದ್ದರೂ ಕೂಡ ಈ ಆಯೋಗದ ಮುಂದೆ ಹಾಜರಾಗದೆ ಇರುವುದರಿಂದ ಇವರನ್ನು ಏಕಪಕ್ಷೀಯವಾಗಿ ಇಡಲಾಯಿತು.
4. ದೂರುದಾರರಿಗೆ ಸಾಕಷ್ಟು ಸಮಯಾವಕಾಶ ಕೊಟ್ಟಿದ್ದರು ದೂರು ದಾಖಲಿಸಿದ ದಿನದಿಂದ ಇದುವರೆಗೆ ಅಯೋಗಕ್ಕೆ ಹಾಜರಾಗದೆ ನುಡಿ ಸಾಕ್ಷ್ಯವನ್ನು ಹಾಜರುಪಡಿಸದೇ ದೂರಿನೊಂದಿಗೆ ದಾಖಲೆಗಳನ್ನು ಮಾತ್ರ ಹಾಜರುಪಡಿಸಿರುತ್ತಾರೆ. ದಾಖಲಾತಿಗಳನ್ನು ಎ ಟು ಎಫ್ ದಾಖಲಿಸಿದ್ದು, ದೂರುದಾರರು ನುಡಿ ಸಾಕ್ಷ್ಯ ಮತ್ತು ವಾದವನ್ನು ಮಂಡಿಸದೇ ಇರುವುದರಿಂದ ಅರ್ಹತೆಯ ಮೇರೆಗೆ ತೀರ್ಪಿಗಾಗಿ ಇಡಲಾಗಿದೆ.
5. ಈ ಕೆಳಕಂಡ ಅಂಶಗಳು ನಮ್ಮ ತೀರ್ಮಾನಕ್ಕಾಗಿ ಮೂಡಿ ಬಂದಿವೆ.
(1) ದೂರುದಾರನು ಎದುರುದಾರರ ಕರ್ತವ್ಯ ಲೋಪ, ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಿ ಮತ್ತು ಸೇವಾ ನ್ಯೂನ್ಯತೆ ಎಸಗಿದ್ದಾರೆ ಎನ್ನುವ ಸಂಗತಿಯನ್ನು ಸಾಬೀತು ಪಡಿಸಿದ್ದಾರೆಯೇ? ಹಾಗಿದ್ದಲ್ಲಿ ಆತ ಕೇಳಿಕೊಂಡ ಪರಿಹಾರಕ್ಕೆ ಅರ್ಹರೇ?
(2) ಆದೇಶ ಏನು?
6. ಮೇಲ್ಕಂಡ ಅಂಶಗಳನ್ನು ಈ ಕೆಳಕಂಡ ಕಾರಣಕ್ಕಾಗಿ ಈ ರೀತಿ ನಿರ್ಣಯಿಸಿದ್ದೇವೆ.
• 1ನೇ ಅಂಶ - ಸಕಾರಾತ್ಮಕವಾಗಿ
• 2ನೇ ಅಂಶ - ಅಂತಿಮ ತೀರ್ಪಿನ ಪ್ರಕಾರ
ಕಾರಣಗಳು
7. 1 ನೇ ಅಂಶದ ಮೇಲೆ:- ದೂರುದಾರರು ತಮ್ಮ ದೂರಿನಲ್ಲಿ ಕೊಟ್ಟ ಸಂಗತಿಗಳನ್ನು ನಾವೂ ಈಗಾಗಲೇ ಸುಧೀರ್ಘವಾಗಿ ಪ್ಯಾರಾ 2ರಲ್ಲಿ ವಿವರಿಸಿದ್ದೇವೆ. ಪ್ರಸ್ತುತ ಪ್ರಕರಣದಲ್ಲಿ ಎದುರುದಾರರು ಆಯೋಗದಿಂದ ಕಳಿಸಿದ ನೋಟೀಸು ಜಾರಿಯಾಗಿದ್ದರೂ ಕೂಡಾ ಈ ಆಯೋಗದ ಮುಂದೆ ಹಾಜರಾಗದೆ ಗೈರು ಹಾಜರಾಗಿರುತ್ತಾರೆ. ಈ ಕಾರಣಕ್ಕಾಗಿ ಅವರನ್ನು ಏಕಪಕ್ಷೀಯ ಎಂದು ನಿರ್ಣಯಿಸಿದೆ. ದೂರುದಾರರು ತನ್ನ ಅಹವಾಲನ್ನು ಸಾಬೀತುಪಡಿಸುವ ಕುರಿತು ಪ್ರಮಾಣ ಪತ್ರವನ್ನು ಹಾಜರುಪಡಿಸದೆ ದಾಖಲೆಗಳನ್ನು ಮಾತ್ರ ಹಾಜರುಪಡಿಸಿರುತ್ತಾರೆ. ಅಲ್ಲದೆ ಸಾಕಷ್ಟು ಕಾಲಾವಕಾಶವನ್ನು ಮಾಡಿಕೊಟ್ಟರೂ ದೂರುದಾರರು ನುಡಿಸಾಕ್ಷ್ಯವನ್ನು ಮತ್ತು ವಾದವನ್ನು ಮಂಡಿಸದೇ ಇರುವುದರಿಂದ ಹಾಜರುಪಡಿಸಿದ ದಾಖಲೆಗಳ ಆಧಾರದ ಮೇಲೆ ದೂರನ್ನು ನಿರ್ಣಯಿಸಲಾಗಿದೆ. ದೂರುದಾರರು ಡಿಸ್ಚಾರ್ಜ್ ವಿವರಗಳನ್ನು ದಿನಾಂಕ 20.09.2017ರಂದು ಪಡೆದುಕೊಂಡು ಮಾಸ್ಟರ್ ಕಾರ್ಡ್ ಮೂಲಕ ಸಂಖ್ಯೆ 1235 ರೂ.31,999/-ಸಂದಾಯದ ವಿವರಗಳನ್ನು ಹಾಜರುಪಡಿಸಿರುತ್ತಾರೆ, ದಾಖಲೆ ಎ ಮತ್ತು ಸಮಸ್ಯೆಗಳು ಇದ್ದಕಾರಣ ಲ್ಯಾಪ್‍ಟಾಪ್ ಅನ್ನು ಹಿಂದಿರುಗಿಸದ ದಾಖಲೆ ಬಿ ಅನ್ನು ಹಾಜರುಪಡಿಸಿರುತ್ತಾರೆ. ಅದರ ಸ್ವೀಕೃತಿಯನ್ನು ಹಾಜರುಪಡಿಸಿರುತ್ತಾರೆ. ಡಿ ಮತ್ತು ಟ್ರ್ಯಾಕ್ ಮೂಲಕ ವಿವರಗಳನ್ನು ಹಾಜರುಪಡಿಸಿದ್ದು, ಇ ಮತ್ತು ಡಿ ಮತ್ತು ಮೇಲ್ ಮೂಲಕ ಸಂವಾದಗಳನ್ನು ಹಾಜರುಪಡಿಸಿರುತ್ತಾರೆ ಎಫ್ ಈ ದಾಖಲೆಗಳನ್ನು ಪರಿಶೀಲಿಸಲಾಗಿ ದೂರುದಾರರು ಎಲ್ಲಾ ರೀತಿಯಲ್ಲಿ ಪ್ರಯತ್ನ ಪಟ್ಟಿದ್ದರೂ ಸಹ ಎದುರುದಾರರು ಹಣವನ್ನು ಹಿಂದಿರುಗಿಸಿಲ್ಲ ಲ್ಯಾಪ್‍ಟಾಪ್ ಅನ್ನು ಮರಳಿ ಪಡೆದುಕೊಂಡಿದ್ದರೂ ಹಣವನ್ನು ಮರುಪಾವತಿ ಮಾಡಿಲ್ಲ ದೂರುದಾರರು ಇಷ್ಟೆಲ್ಲಾ ಪ್ರಯತ್ನ ಪಟ್ಟಿದ್ದರೂ ಎದುರುದಾರರು ಯಾವುದೇ ರೀತಿ ಜವಾಬುಕೊಡದೆ, ಇದನ್ನು ಆಯೋಗಕ್ಕೆ ಹಾಜರಾಗಿ ಅಲ್ಲಗಳೆಯದೆ ಇದ್ದ ಕಾರಣ ದೂರುದಾರರು ಹೇಳಿದ ಸಂಗತಿಗಳು ನಿಜವೆಂಬ ಅಭಿಪ್ರಾಯಕ್ಕೆ ಬಂದಿದ್ದು ಹಣವನ್ನು ಹಿಂದಿರುಗಿಸದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಈ ಕಾರಣಕ್ಕಾಗಿ ದೂರುದಾರರು ಕೇಳಿಕೊಂಡ ಲ್ಯಾಪ್‍ಟಾಪ್‍ನಲ್ಲಿ ಸಮಸ್ಯೆಗಳು ಇರುವುದರಿಂದ ಹಿಂದಿರುಗಿಸಲಾದ ಲ್ಯಾಪ್‍ಟಾಪ್‍ಗೆ ಕಟ್ಟಿದ ಹಣವನ್ನು 31,999/- ರೂಪಾಯಿಗಳನ್ನು ದೂರುದಾರರಿಗೆ ಹಿಂದಿರುಗಿಸುವಂತೆ ಎದುರುದಾರರಿಗೆ ಸೂಚಿಸಿದೆ. ಅದರಂತೆ ದೂರುದಾರರಿಗೆ 31,999/- ಜೊತೆಗೆ ಶೇಕಡ 6 ಬಡ್ಡಿಯಂತೆ ಪರಿಹಾರ ರೂಪವಾಗಿ ಲ್ಯಾಪ್‍ಟಾಪ್ ಹಿಂದಿರುಗಿಸಿದ ದಿನಾಂಕದಿಂದ ಹಣವನ್ನು ಮರುಪಾವತಿ ಮಾಡುವವರೆಗೆ ಪಾವತಿಸಲು ನಿರ್ದೇಶಿಸಿದೆ. ಮತ್ತು ನ್ಯಾಯಾಲಯದ ಖರ್ಚು 2,000/- ಗಳನ್ನು ಕೊಡಲು ನಿರ್ಣಯಿಸಿದೆ. ಈ ಕಾರಣಕ್ಕಾಗಿ 1ನೇ ಅಂಶವನ್ನು ಭಾಗಶ: ಸಕಾರಾತ್ಮಕವಾಗಿ ಉತ್ತರಿಸಲಾಗಿದೆ.
8. 2ನೇ ಅಂಶದ ಮೇಲೆ:- 1ನೇ ಅಂಶದಲ್ಲಿ ತಿಳಿಸಿರುವ ಕಾರಣಕ್ಕಾಗಿ ನಾವು ಈ ಕೆಳಗಿನಂತೆ ಆದೇಶವನ್ನು ಮಾಡುತ್ತೇವೆ.
ಆದೇಶ
1. ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಕಲಂ 35ರ ಅನ್ವಯ ದೂರನ್ನು ಭಾಗಶ: ಪುರಸ್ಕರಿಸಲಾಗಿದೆ.
2. ಎದುರುದಾರನು ದೂರುದಾರರಿಗೆ ರೂ.31,999/- ಗಳನ್ನು ಶೇಕಡ 6ರ ಬಡ್ಡಿಯಂತೆ ಪರಿಹಾರ ರೂಪವಾಗಿ ಈ ದೂರನ್ನು ಸಲ್ಲಿಸಿದ ದಿನಾಂಕದಿಂದ ಮೂಲ ಹಣವನ್ನು ಪಾವತಿಯಾಗುವವರೆಗೆ ಕೊಡಬೇಕೆಂದು ಮತ್ತು ನ್ಯಾಯಾಲಯದ ಖರ್ಚು ರೂ.2,000/- ಗಳನ್ನು ಹಾಗೂ ಮೇಲೆ ಕಾಣಿಸಿದ ಹಣವನ್ನು ಈ ಆದೇಶದ ದಿನಾಂಕದಿಂದ 45 ದಿನಗಳೊಳಗೆ ಪಾವತಿಸತಕ್ಕದ್ದು, ತಪ್ಪಿದಲ್ಲಿ ದೂರು ಸಲ್ಲಿಸಿದ ದಿನಾಂಕದಿಂದ ರೂ.31,999/- ಗಳಿಗೆ ಮರುಪಾವತಿಯಾಗುವವರೆಗೆ ಶೇಕಡ 9 ರಂತೆ ವಾರ್ಷಿಕ ಬಡ್ಡಿ ಸಹಿತ ಪಾವತಿಸತಕ್ಕದ್ದು.
3. ಈ ಆದೇಶದ ಪ್ರತಿಗಳನ್ನು ನಿಯಮಾನುಸಾರ ಉಭಯಪಕ್ಷಕಾರರಿಗೆ ಉಚಿತವಾಗಿ ನೀಡತಕ್ಕದ್ದು.
(ಶೀಘ್ರಲಿಪಿಗಾರರಿಗೆ ಉಕ್ತಲೇಖನ ನೀಡಿ, ಬೆರಳಚ್ಚು ಮಾಡಿಸಿ, ತಪ್ಪುಗಳನ್ನು ನೋಡಿ ಸರಿಪಡಿಸಿ ಅಂತಿಮ ಆದೇಶವನ್ನು 06ನೇ ಅಕ್ಟೋಬರ್ 2022 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಯಿತು)
(ರೇಣುಕಾದೇವಿ ದೇಶ್‍ಪಾಂಡೆ)
ಮಹಿಳಾ ಸದಸ್ಯರು (ಹೆಚ್.ಜನಾರ್ಧನ್)
ಸದಸ್ಯರು (ಕೆ.ಎಸ್.ಬೀಳಗಿ)
ಅಧ್ಯಕ್ಷರು